ಕಂಪ್ಯಾನುಲ : ಕಂಪ್ಯಾನುಲೇಸೀ ಕುಟುಂಬಕ್ಕೆ ಸೇರಿದ ಸಸ್ಯಜಾತಿ. ಪೊದೆಯಂತೆ ಬೆಳೆಯುವ ಇದು ಬೆಟ್ಟಗಾಡು ಪ್ರದೇಶಗಳಲ್ಲಿ ಹೇರಳವಾಗಿ ಕಾಣಬರುತ್ತದೆ. ಈ ಜಾತಿಯಲ್ಲಿ ಸು. 250 ಏಕವಾರ್ಷಿಕ, ದ್ವೈವಾರ್ಷಿಕ ಹಾಗೂ ಬಹುವಾರ್ಷಿಕ ಪ್ರಭೇದಗಳಿವೆ. ಇವುಗಳಲ್ಲಿ ಕೆಲವು ಅತ್ಯಂತ ಸುಂದರವಾದ ಹೂ ಬಿಡುವ ಗಿಡಗಳಾಗಿದ್ದು ಅಂಚುಸಸ್ಯಗಳಾಗಿ ಉದ್ಯಾನಪ್ರಾಮುಖ್ಯವನ್ನು ಪಡೆದಿವೆ. ಗಿಡದ ಎತ್ತರ ಸು. 18"-36". ಬೇರಿನಿಂದ ಹೊರಟಂತಿರುವ ಎಲೆಗಳು (ಭೂಎಲೆ) ಮತ್ತು ಕಾಂಡದ ಮೇಲಿನ ಎಲೆಗಳು-ಹೀಗೆ ಎಲೆ ಎರಡು ಬಗೆ. ಬೇರಿನ ಎಲೆಗಳು ಕಾಂಡದವಕ್ಕಿಂತ ದೊಡ್ಡವು ಮತ್ತು ಅನಿರ್ದಿಷ್ಟ ಆಕಾರದವು. ಹೂಗಳು ಅಂತ್ಯಾರಂಭಿ (ರೇಸಿಮೋಸ್) ಮಾದರಿಯ ಹೂಗೊಂಚಲಿನಲ್ಲಿವೆ. ಪುಷ್ಪಪತ್ರಗಳು 5. ಇವು ಬಟ್ಟಲಿನಂತೆ ಅಗಲ. ಗಂಟೆಯಾಕಾರದ ಪುಷ್ಪದಳಗಳು 5; ಕೂಡಿಕೊಂಡಿವೆ. ಕೇಸರಗಳು 5. 

ಇವುಗಳ ದಂಡ ಬುಡದಲ್ಲಿ ಅಗಲ. ಅಂಡಾಶಯ ನೀಚಸ್ಥಾನದ್ದು. ಅದರಲ್ಲಿ 5 ಅಥವಾ 2 ಕೋಣೆಗಳಿವೆ. ಅಂಡಕ ಗಳು ಅನೇಕ. ಬಹುಬೀಜಗಳಿರುವ ಬೆರ್ರಿ ಮಾದರಿಯ ಫಲ. ಉದ್ಯಾನ ಪ್ರಾಮುಖ್ಯ ಗಳಿಸಿರುವ ಎರಡು ಪ್ರಭೇದ ಗಳನ್ನು ಕೆಳಗೆ ವಿವರಿಸಿದೆ.
ಕಂಪ್ಯಾನುಲ ಪಿರಮಿಡ್ಯಾಲಿಸ್: ಈ ಪ್ರಭೇದ ಸು. 5 ಅಡಿ ಎತ್ತರ ಬೆಳೆಯುತ್ತದೆ. ಕಾಂಡ ಕೊಳವೆ ಯಾಕಾರ, ದಪ್ಪ; ಕೆಲವು ಸಸ್ಯಗಳಲ್ಲಿ ಟೊಳ್ಳಾಗಿರುತ್ತದೆ. ಉದ್ದವಾದ ತೊಟ್ಟಿರುವ ಭೂಎಲೆ ಹೃದಯಾಕಾರ ಅಥವಾ ಕರನೆಯಾಕಾರದಲ್ಲಿದ್ದು ಹಲ್ಲು ಅಂಚು ಮತ್ತು ಗ್ರಂಥಿಗಳಿಂದ ಕೂಡಿರುತ್ತದೆ. ಕಾಂಡ ಎಲೆ ಕರನೆಯಾಕಾರದಲ್ಲಿದ್ದು ತುದಿ ಮೊನಚಾಗಿರುತ್ತದೆ. ಹೂಗೊಂಚಲು ತುದಿಯಲ್ಲಿರುವ ಉದ್ದವಾದ ಅಂತ್ಯಾರಂಭಿ ಅಥವಾ ಸಂಕೀರ್ಣ ಪುಷ್ಪಗುಚ್ಚ (ಪ್ಯಾನಿಕಲ್) ಮಾದರಿಯದು. ಹೂಗೊಂಚಲು ಗೋಪುರಾಕಾರ ವಾಗಿರುವುದರಿಂದ ಈ ಪ್ರಭೇದಕ್ಕೆ ಪಿರಮಿಡ್ಯಾಲಿಸ್ ಎಂಬ ಹೆಸರು ಬಂದಿದೆ. ಪುಷ್ಪಪತ್ರ ಸಮೂಹದ ಭಾಗಗಳು ವಿಶಾಲವಾಗಿ ಹರಡಿಕೊಂಡಿದ್ದು, ಅದರ ಮೇಲೆ ಬಟ್ಟಲಿನಂಥ ದಳ ಸಮೂಹವಿರುವುದರಿಂದ ತಟ್ಟೆಯಲ್ಲಿ ಬಟ್ಟಲು ಇಟ್ಟಂತೆ ಕಾಣುತ್ತದೆ. ಈ ಸಸ್ಯ ದಕ್ಷಿಣ ಎಕ್ವಡಾರ್ ದೇಶದ ಮೂಲವಾಸಿ.

ಕಂಪ್ಯಾನುಲ ಮೀಡಿಯಮ್: ಇದು ಸು. 4' ಎತ್ತರ ಬೆಳೆಯುವ ಮಧ್ಯಮ ಎತ್ತರದ ದ್ವೈವಾರ್ಷಿಕ ಸಸ್ಯ.  ಭೂಎಲೆ ವಿರುದ್ಧ ಭರ್ಜಿಯಾಕಾರ ದ್ದಾಗಿದ್ದು ಬುಡ ಕಿರಿದಾಗಿ ತುದಿ ಅಗಲವಾಗಿರುತ್ತದೆ. ತೊಟ್ಟಿಲ್ಲದ ಕಾಂಡ ಎಲೆ ಭರ್ಜಿಯಾಕಾರ ಅಥವಾ ಆಯತಾಕಾರದ್ದಾಗಿದೆ. 
ತುದಿಯಲ್ಲಿ ಉದ್ದವಾಗಿ ಸಡಿಲವಾಗಿರುವ ಹೂಗಳಿಂದ ಕೂಡಿದ ಅಂತ್ಯಾರಂಭಿ ಹೂಗೊಂಚಲಿದೆ; ಹಿಂದಕ್ಕೆ ಬಾಗಿದ ಕೂಡುಪುಷ್ಪಪತ್ರ ಸಮೂಹವಿದೆ. ಭರ್ಜಿಯಾಕಾರದ ಬಿಡಿ ತುದಿಭಾಗ ಹಿಂದಕ್ಕೆ ಬಾಗಿರುತ್ತದೆ. ಗಂಟೆ ಯಾಕಾರದ ಹೂದಳಗಳ ತುದಿಭಾಗ ಹಿಂದಕ್ಕೆ ಬಾಗಿರುತ್ತವೆ. ಕೇಸರಗಳು 5. ಈ ಪ್ರಭೇದದ ಸೈಕ್ಲಾಂತಿಯ ತಳಿ ಹೆಚ್ಚಿನ ಬೇಸಾಯದಲ್ಲಿದೆ.

ಈ ಸಸ್ಯಗಳನ್ನು ಬೀಜ, ಕಾಂಡದ ತುಂಡುಗಳು ಮತ್ತು ಬೇರು ತುಂಡು ಗಳಿಂದ ವೃದ್ಧಿ ಮಾಡಬಹುದು. ಬಿತ್ತಿದ ಸು. 10 ದಿವಸಗಳಲ್ಲಿ ಬೀಜಗಳು ಮೊಳೆಯುತ್ತವೆ. 3-4 ಅಂಗುಲ ಎತ್ತರದ ಸಸಿಗಳನ್ನು ಕಿತ್ತು 2 ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಕೊಂಚ ನೆರಳಿದ್ದರೆ ಬೆಳೆವಣಿಗೆಗೆ ಅನುಕೂಲ. ಸಸಿ ನಾಟಿಮಾಡಿದ 6 ತಿಂಗಳ ಅನಂತರ ಹೂ ಬಿಡುತ್ತದೆ.                                                     	(ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ